Avva (ಅವ್ವ) - Mother

Palya Lankesh
ನನ್ನವ್ವ ಫಲವತ್ತಾದ ಕಪ್ಪು ನೆಲ
ಅಲ್ಲಿ ಹಸಿರು ಪತ್ರದ ಹರವು, ಬಿಳಿಯ ಹೂ ಹಬ್ಬ;
ಸುಟ್ಟಷ್ಟು ಕಸುವು, ನೊಂದಷ್ಟು ಹೂ ಹಣ್ಣು
ಮಕ್ಕೊಳೊದ್ದರೆ ಅವಳ ಅಂಗಾಂಗ ಪುಲಕ;
ಹೊತ್ತ ಬುಟ್ಟಿಯ ಇಟ್ಟು ನರಳಿ ಎವೆ ಮುಚ್ಚಿದಳು ತೆರೆಯದಂತೆ.
ಪಲ್ಲ ಜೋಳವ ಎತ್ತಿ ಅಪ್ಪನ್ನ ಮೆಚ್ಚಿಸಿ ತೋಳಬಂದಿಯ ಗೆದ್ದು,
ಹೆಂಟೆಗೊಂದು ಮೊಗೆ ನೀರು ಹಿಗ್ಗಿ;
ಮೆಣಸು, ಅವರೆ, ಜೋಳ, ತೊಗರಿಯ ಹೊಲವ ಕೈಯಲ್ಲಿ ಉತ್ತು,
ಹೂವಲ್ಲಿ ಗದ್ದೆಯ ನೋಡಿಕೊಂಡು,
ಯೌವನವ ಕಳೆದವಳು ಚಿಂದಿಯ ಸೀರೆ ಉಟ್ಟುಕೊಂಡು.
ಸತ್ತಳು ಈಕೆ:
ಬಾಗು ಬೆನ್ನಿನ ಮುದುಕಿಗೆಷ್ಟು ಪ್ರಾಯ?
ಎಷ್ಟು ಗಾದಿಯ ಚಂದ್ರ, ಒಲೆಯೆದುರು ಹೋಳಿಗೆಯ ಸಂಭ್ರಮ?
ಎಷ್ಟು ಸಲ ಈ ಮುದುಕಿ ಅತ್ತಳು
ಕಾಸಿಗೆ, ಕೆಟ್ಟ ಪೈರಿಗೆ, ಸತ್ತ ಕರುವಿಗೆ;
ಎಷ್ಟು ಸಲ ಹುಡುಕುತ್ತ ಊರೂರು ಅಲೆದಳು
ತಪ್ಪಿಸಿಕೊಂಡ ಮುದಿಯ ಎಮ್ಮೆಗೆ ?
ಸತಿ ಸಾವಿತ್ರಿ, ಜಾನಕಿ, ಊರ್ಮಿಳೆಯಲ್ಲ;
ಚರಿತ್ರೆ ಪುಸ್ತಕದ ಶಾಂತ, ಶ್ವೇತ, ಗಂಭೀರೆಯಲ್ಲ;
ಗಾಂಧೀಜಿ , ರಾಮಕೃಷ್ಣರ ಸತಿಯರಂತಲ್ಲ;
ಮುತ್ತೈದೆಯಾಗಿ ಕುಂಕುಮ ಕೂಡ ಇಡಲಿಲ್ಲ.
ಬನದ ಕರಡಿಯ ಹಾಗೆ
ಚಿಕ್ಕ ಮಕ್ಕಳ ಹೊತ್ತು
ಗಂಡನ್ನ ಸಾಕಿದಳು ಕಾಸು ಗಂಟಿಕ್ಕಿದಳು
ನೊಂದ ನಾಯಿಯ ಹಾಗೆ ಬೈದು, ಗೊಣಗಿ, ಗುದ್ದಾಡಿದಳು;
ಸಣ್ಣತನ, ಕೊಂಕು, ಕೆರೆದಾಟ ಕೋತಿಯ ಹಾಗೆ:
ಎಲ್ಲಕ್ಕೆ ಮನೆತನದ ಉದ್ಧಾರ ಸೂತ್ರ.
ಈಕೆ ಉರೆದೆದ್ದಾಳು
ಮಗ ಕೆಟ್ಟರೆ, ಗಂಡ ಬೇರೆ ಕಡೆ ಹೋದಾಗ ಮಾತ್ರ.
ಬನದ ಕರಡಿಗೆ ನಿಮ್ಮ ಭಗವದ್ಗೀತೆ ಬೇಡ;
ನನ್ನವ್ವ ಬದುಕಿದ್ದು
ಕಾಳುಕಡ್ಡಿಗೆ, ದುಡಿತಕ್ಕೆ, ಮಕ್ಕಳಿಗೆ;
ಮೇಲೊಂದು ಸೂರು, ಅನ್ನ , ರೊಟ್ಟಿ , ಹಚಡಕ್ಕೆ;
ಸರೀಕರ ಎದುರು ತಲೆಯೆತ್ತಿ ನಡೆಯಲಿಕ್ಕೆ.
ಇವಳಿಗೆ ಮೆಚ್ಚುಗೆ, ಕೃತಜ್ಞತೆಯ ಕಣ್ಣೀರು:
ಹೆತ್ತದ್ದಕ್ಕೆ ಸಾಕಿದ್ದಕ್ಕೆ ; ಮಣ್ಣಲ್ಲಿ ಬದುಕಿ,
ಮನೆಯಿಂದ ಹೊಲಕ್ಕೆ ಹೋದಂತೆ
ತಣ್ಣಗೆ ಮಾತಾಡುತ್ತಲೇ ಹೊರಟು ಹೋದದ್ದಕ್ಕೆ.
English Versions of Avva (Mother)
treating her fields like tender buds,
with her double-bent back.
